ಪುನಂ ನಂಬೂದಿರಿ -
ಕೊಲ್ಲವರ್ಷ 7 ನೆಯ ಶತಕದಲ್ಲಿ (ಕ್ರಿ. ಶ. ಹತ್ತನೆಯ ಶತಮಾನ) ಕಲ್ಲಿಕೋಟೆಯ ಸಾಮೂದಿರಿಮಾನ ವಿಕ್ರಮನ 19 ಮಂದಿ ಆಸ್ಥಾನ ಕವಿಗಳಲ್ಲೊಬ್ಬ. ಉಳಿದ 18 ಮಂದಿಯೂ ಸಂಸ್ಕøತ ಕವಿಗಳು. ಈತ ಮಾತ್ರ ಮಲೆಯಾಳಂ ಕವಿ. ಆದ ಕಾರಣ ಅರ್ಧಕವಿ ಪದವಿ ಮಾತ್ರವೇ ಈತನಿಗೆ ಲಭ್ಯವಾಗಿತ್ತಂತೆ. 

ಈತನ ನಿಜವಾದ ಹೆಸರು ಜೀವನಕಾಲಗಳನ್ನು ಕುರಿತ ವಿವರಗಳು ಲಭ್ಯವಿಲ್ಲ. ಕೃಷ್ಣಗಾಥಾದ ಕರ್ತೃ ಚಿರುಶ್ಯೇರಿ ನಂಬೂದಿರಿಯೂ ಪುನಂ ಮನೆತನಕವನೇ ಎಂಬ ಅಭಿಪ್ರಾಯವಿದೆ. ಮಹಾಕವಿ ಉಳ್ಳೂರರ ಅಭಿಪ್ರಾಯದಂತೆ ಈತನ ಕಾಲ ಕೊಲ್ಲವರ್ಷ 600-680 ರ ಮಧ್ಯೆ 1423 ರಿಂದ 1446, 1466 ರಿಂದ 1471 ಎಂದು ಭಿನ್ನಾಭಿಪ್ರಾಯಗಳಿವೆ.
ತಲಶ್ಯೇರಿಯ ಬಳಿ ಕೊತ್ತುಪರಂಬಿನಲ್ಲಿ ಪುನಂ ಎಂಬ ಹೆಸರಿನ ಮನೆತನವಿದೆಯೆಂದೂ ಕವಿ ಆ ಮನೆಯ ಒಬ್ಬನಾಗಿದ್ದನೆಂದೂ ಹೇಳಿಕೆಯಿದೆ. 

ಈತ ಮಣಿಪ್ರವಾಳ ಶೈಲಿಯ ಚಂಪೂಕಾವ್ಯಗಳ ಕರ್ತೃ. ಮುಖ್ಯ ಕೃತಿ ಇಪ್ಪತ್ತು ಭಾಗಗಳಿರುವ ರಾಮಾಯಣ ಚಂಪು ಗಾತ್ರದಲ್ಲಾಗಲಿ, ಕಾವ್ಯಾಂಶದಲ್ಲಾಗಲಿ ಇದನ್ನು ಸರಿಗಟ್ಟಬಲ್ಲ ಚಂಪೂ ಸಂಸ್ಕøತ ಮಲೆಯಾಳಂಗಳಲ್ಲಿಲ್ಲ. ವಾಲ್ಮೀಖಿ ಮೂಲವಾದರೂ ಇದರಲ್ಲಿ ಸ್ವಂತಿಕೆಯ ಮನೋಹರವಾದ ಮಣಿಪ್ರವಾಳ ಶೈಲಿಯ ಮೆರುಗಿದೆ. ವಿಡಂಬನೆ ಮುಖ್ಯವಾಗಿ ರಾವಣ. ಶೂರ್ಪನಖಿ ಪಾತ್ರಗಳ ಮೂಲಕ ಸಮರ್ಥವಾಗಿ ಹೊಮ್ಮಿದೆ. ಪ್ರಾಯಶಃ ವಿಡಂಬನದಿಂದ ಸಮಾಜ ಸುಧಾರಣೆ ಸಾಧ್ಯವೆಂಬುದನ್ನು ಕುಂಜನ್ ನಂಬಿಯಾರ್ ಪುನಃ ನಂಬೂದಿರಿಯಿಂದ ಅರಿತದ್ದಾಗಿರಬಹುದು. ಭಾಷಾವೃತ್ತದಲ್ಲಿಯ ಮಣಿಪ್ರವಾಳ ರಚನೆ, ಎರಡು ಸಾವಿರಕ್ಕೂ ಹೆಚ್ಚು ಪದ್ಯಗಳು ನೂರೈವತ್ತಕ್ಕೆ ಮಿಕ್ಕಿ ಗದ್ಯ. ಹೊರತಾಗಿ ಶ್ಲೋಕಗಳೂ (ಖಿಂಡಿಕ) ಈ ಕಾವ್ಯದಲ್ಲಿ ಇವೆ.

ಎಲ್ಲ ವಿಧದಲ್ಲೂ ರಾಮಾಯಣ ಚಂಪುವಿಗಿಂತ ಕೆಳಸ್ತರದ ಕಾವ್ಯ 14 ಭಾಗಗಳ ಭಾರತ ಚಂಪೂ. ಇದರ ಕರ್ತೃ ಪುನಂ ನಂಬೂದಿರಿಯೇ ಎಂಬುದೂ ಬರಿಯ ಊಹೆ.

	ವಡಕ್ಕುಂಕೂರ್ ಅವರ ಅಭಿಪ್ರಾಯದಂತೆ ಕವಿ ಇವುಗಳನ್ನಲ್ಲದೆ ನಾರಾಯಣೀಯಂ ಕೊಡಿಯ ವಿರಹಂಗಳನ್ನೂ ಬರೆದಿದ್ದಾನೆ. ರಾಜರಾಜವರ್ಮ ಮೊದಲಾದವರು ಹೇಳುತ್ತಾರೆ-ಪುರಾಣ ವಸ್ತುಗಳನ್ನಾಯ್ದುಕೊಂಡು ಬರೆಯಲಾದ ಉಣ್ಣೆಯಚ್ಚಿ ಚರಿತಂ, ಉಣ್ಣೆಯಾಡಿ ಚರಿತಂ ಚಂಪೂ ಕಾವ್ಯಗಳಿಗಿಂತ ಪುನಃ ನಂಬೂದಿರಿಯ ಕೃತಿಗಳು ಬೇರೆಯೇ ಆದ ಸಾಲಿನಲ್ಲಿ ನಿಲ್ಲುತ್ತವೆ-ಎಂದು.
(ಬಿ.ಕೆ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ